ರಚನೆ: ಸರ್ವಜ್ಞ

ಅನ್ನ ದೇವರ ಮುಂದೆ ಇನ್ನು ದೇವರು ಉಂಟೆ?
ಅನ್ನವಿರುವನಕ ಪ್ರಾಣವು; ಜಗದೊಳ
ಗನ್ನವೇ ದೈವ! ಸರ್ವಜ್ಞ ||

ನಿದ್ದೆಗಳು ಬಾರವು ಬುದ್ಧಿಗಳು ತಿಳಿಯವು
ಮುದ್ದಿನ ಮಾತು ಸೊಗಸದು ಬೋನದ
ಮುದ್ದೆ ತಪ್ಪಿದರೆ ಸರ್ವಜ್ಞ ||

ಕೊಟ್ಟಣವ ಕುಟ್ಟಿಪುದು ಮಟ್ಟೆಯನು ಹೊಱೆಸುವುದು
ಬಿಟ್ಟಿ ಕೂಲಿಗಳ ಮಾಡಿಸುವುದು ಗೇಣು
ಹೊಟ್ಟೆ ಕಾಣಯ್ಯ ಸರ್ವಜ್ಞ ||

ಹಸಿಯದಿರೆ ಉಣಬೇಡ ಹಸಿದು ಮತ್ತಿರಬೇಡ
ಬಿಸಿ ಬೇಡ ತಂಗಳೂಟವು ಬೇಡ ವೈದ್ಯರಾ
ಬೆಸನವೇ ಬೇಡ ಸರ್ವಜ್ಞ ||

ಅಕ್ಕಿಯನು ಉಂಬುವನು ಹಕ್ಕಿಯಂತಾಗುವನು
ಸಿಕ್ಕಿ ರೋಗದಲಿ ರೊಕ್ಕವ ವೈದ್ಯನಿ
ಗಿಕ್ಕುತಲಿರುವ ಸರ್ವಜ್ಞ ||

ಉಂಡು ಕೆಂಡವ ಕಾಸಿ ಉಂಡು ಶತಪದ ನಡೆದು
ಉಂಡೆಡದ ಮಗ್ಗುಲಲಿ ಮಲಗಿದರೆ ವೈದ್ಯನ
ಬಂಡಾಟವಿಲ್ಲ ಸರ್ವಜ್ಞ ||

ವರ್ಗ: ಸರ್ವಜ್ಞನ ವಚನಗಳು
ವರ್ಗ: ವಚನ ಸಾಹಿತ್ಯ